ಮಧ್ಯಕಾಲೀನ ತತ್ತ್ವಶಾಸ್ತ್ರ

	ಯೂರೊಪಿನ ಪ್ರಾಚೀನ ದರ್ಶನ ಸ್ವತಂತ್ರ ವಿಚಾರ ಧಾರೆಯಲ್ಲಿ ಆರಂಭವಾಗಿ ಶ್ರದ್ಧಾಪೂರ್ಣತೆಯಲ್ಲಿ ಕೊನೆಗೊಂಡರೆ ಮಧ್ಯಕಾಲೀನ ದರ್ಶನವಾದರೂ (ಮಿಡಿವಲ್ ಫಿಲಾಸಫಿ) ಶ್ರದ್ಧಾಪೂರ್ಣತೆಯಲ್ಲಿ ಆರಂಭವಾಗಿ ಸ್ವತಂತ್ರ ವಿಚಾರಧಾರೆಯಲ್ಲಿ ಕೊನೆಗೊಂಡಿತು. ಮಧ್ಯಕಾಲೀನ ದರ್ಶನಗಳ ಭೂಮಿಕೆಯನ್ನು ಫೈಲೋ ಮತ್ತು ಫ್ಲೋಟಿನಸ್ ಇವರಲ್ಲಿ ಕಾಣುತ್ತೇವೆ. ಕ್ರೈಸ್ತಧರ್ಮಕ್ಕೆ ಸಂಬಂಧಪಟ್ಟ ವಿಚಾರಧಾರೆ ಮಧ್ಯಯುಗದಲ್ಲಿ ಪ್ರಧಾನವಾಯಿತು. ಮಹತತ್ತ್ವ, ಲೋಗಾಸ್ ಅಥವಾ ವಾಕ್‍ಸಿದ್ಧಾಂತ, ಕ್ರೈಸ್ತಧರ್ಮದ ತ್ರಿಮೂರ್ತಿತತ್ತ್ವ, ಪರಮಾತ್ಮನಿಗೂ ಕ್ರಿಸ್ತನಿಗೂ ಇರುವ ಸಂಬಂಧ, ಮೂಲಪಾಪ, ಮಾನವ ಸ್ವಾತಂತ್ರ್ಯ-ಇವೇ ಮೊದಲಾದ ಪ್ರಶ್ನೆಗಳು ತತ್ತ್ವಜ್ಞಾನದ ಪುಟಗಳನ್ನು ತುಂಬಿಕೊಂಡವು. ವಾಸ್ತವವಾಗಿ ಮಧ್ಯಕಾಲೀನ ತತ್ತ್ವಜ್ಞಾನ ಸಂತ ಅಗಸ್ಟೀನ್‍ನಲ್ಲಿ ಸ್ಪಷ್ಟರೂಪ ತಾಳಿತು. ರೀತಿಯ ಸಂಪ್ರದಾಯಗಳಿಗೆ ದಾರಿಮಾಡಿ ಕೊಟ್ಟಿದ್ದುವು. ಮೊದಲ ಸಂಪ್ರದಾಯದ ಪ್ರತಿಪಾದಕರನ್ನು ಅಪಾಲಜಿಸ್ಟ್ಸ್ ಎಂದು ಇತಿಹಾಸಜ್ಞರು ಕರೆದರು. ಕ್ರೈಸ್ತಮತ ಧರ್ಮಗಳ ಮಂಡನೆ ಇವರ ಮುಖ್ಯ ಉದ್ದೇಶವಾಗಿತ್ತು. ಎರಡನೆಯ ಸಂಪ್ರದಾಯದವರನ್ನು ಗ್ನಾಸ್ಟಿಕ್ಸ್ (ನಿಶ್ಚಯವಾದಿಗಳು ಅಥವಾ ಆಧ್ಯಾತ್ಮರಹಸ್ಯವಾದಿಗಳು) ಎಂದೂ ಮೂರನೆಯ ಸಂಪ್ರದಾಯವಾದಿಗಳನ್ನು ಕ್ಯಾಟೆಕಿಸ್ಟ್ಸ್ ಎಂದೂ ಕರೆದರು. ಪ್ರಶ್ನೋತ್ತರಕಾರರೆಂದು ಇವರನ್ನು ವರ್ಣಿಸಬಹುದು. ಇವರು ತಾರ್ಕಿಕ ಪ್ರಮಾಣಕ್ಕೂ ಶಬ್ದ ಅಥವಾ ಆಪ್ತವಾಕ್ಯ ಪ್ರಮಾಣಕ್ಕೂ ಸಮನ್ವಯ ಏರ್ಪಡಿಸುವ ಪ್ರಯತ್ನದಲ್ಲಿ ನಿರತರಾದರು. ಗ್ನಾಸ್ಟಿಕ್ ವಾದಿಗಳು ಕ್ರೈಸ್ತರಾಗಿದ್ದರೂ ಮಿಶ್ರಜ್ಞಾನವಾದಿಗಳು. ಬೈಬಲ್ ವಾಕ್ಯಗಳನ್ನು ರೂಪಕಗಳೆಂದೂ ದೃಷ್ಟಾಂತ ಸ್ವರೂಪದವವೆಂದೂ ಇವರು ವಾದಿಸಿದರು. ಕ್ಯಾಟೆಕಿಸ್ಟರ ಸಂಪ್ರದಾಯದ ಪ್ರವರ್ತಕ ತತ್ತ್ವಜ್ಞಾನಿ ಕ್ಲೆಮೆಂಡ್ ಒರಿಜಿಯನ್ ಈ ಸಂಪ್ರದಾಯದಲ್ಲಿ ಪ್ರಮುಖ. ಈತನಲ್ಲಿ ಗ್ರೀಕ್ ತಾತ್ತ್ವಿಕರ ಪ್ರಭಾವ ಸ್ಪಷ್ಟವಾಗಿ ಮೂಡಿದ್ದಿತು. ಧಾರ್ಮಿಕ ತತ್ತ್ವಗಳನ್ನು ದಾರ್ಶನಿಕ ಯುಕ್ತಿ ತರ್ಕಗಳಿಂದ ಸಮರ್ಥನೆ ಮಾಡುವ ಪ್ರಯತ್ನವನ್ನು ಮಧ್ಯಕಾಲೀನ ತಾತ್ತ್ವಿಕರಾದ ಥಾಮಸ್ ಅಕ್ವೈನಾಸ್ ಮೊದಲಾದವರಲ್ಲಿ ಕಾಣುತ್ತೇವೆ. ಇವರುಗಳ ಮನಸ್ಸಿನ ಮೇಲೆ ಅರಿಸ್ಟಾಟಲ್‍ನ ತತ್ತ್ವಜ್ಞಾನದ ಪ್ರಭಾವ ಕಂಡುಬರುತ್ತದೆ. ಅರಿಸ್ಟಾಟಲ್‍ನ ತರ್ಕಪದ್ಧತಿ ಕ್ರೈಸ್ತಧರ್ಮದ ಉಪದೇಶಗಳಲ್ಲಿ ಬಳಕೆಯಾಗುತ್ತಿದ್ದುದು ಮಧ್ಯಯುಗದ ಕ್ರೈಸ್ತತತ್ತ್ವ ಜ್ಞಾನದಲ್ಲಿ ಕಾಣಬರುತ್ತದೆ. ತರ್ಕಪ್ರಮಾಣಗಳಿಗೂ ಶಬ್ದ ಪ್ರಮಾಣಕ್ಕೂ ಸಮನ್ವಯ ಉಂಟುಮಾಡುವ ಪ್ರಯತ್ನವೂ ಇಲ್ಲಿ ಕಾಣಸಿಗುತ್ತದೆ. ಸಂತ ಅಗಸ್ಟೀನ್‍ನಲ್ಲಿ ಹೆಚ್ಚಾಗಿ ಪ್ಲೇಟೋವಿನ ಪ್ರಭಾವವಿದೆ. ಭಗವಂತನ ರಾಜ್ಯ ಎನ್ನುವ ಅವನ ಗ್ರಂಥ ಪ್ಲೇಟೋವಿನ ರಿಪಬ್ಲಿಕ್ ಗ್ರಂಥವನ್ನು ಹೋಲುತ್ತದೆ. 

	ಕ್ರೈಸ್ತ ಧರ್ಮದ ತತ್ತ್ವ ಜ್ಞಾನದಲ್ಲಿ ಎರಡನೆಯ ಘಟ್ಟವನ್ನು ಪಂಡಿತರಯುಗ (ಸ್ಕೊಲಾಸ್ಟಿಕ್ ಪೀರಿಯಡ್) ಎಂದು ಕರೆಯಲಾಗಿದೆ. ಇದು ಕ್ರೈಸ್ತ ಸಂನ್ಯಾಸಿಗಳ ಪ್ರಾಬಲ್ಯದ ಕಾಲ. ಇವರುಗಳಿಗೆ ಈ ಕಾಲದ ತತ್ತ್ವಜ್ಞಾನವೆಲ್ಲ ಕರಗತವಾಗಿತ್ತು. ಇವರೇ ಈ ಯುಗದ ನಿಷ್ಠಾವಂತರೂ ಜ್ಞಾನಿಗಳೂ ಆಚಾರ್ಯರೂ ದಾರ್ಶನಿಕರೂ ಮಾರ್ಗದರ್ಶಿಗಳೂ ಆಗಿದ್ದರು. ಇವರ ತತ್ತ್ವಜ್ಞಾನದ ಅಭ್ಯಾಸವೆಲ್ಲಾ ಧರ್ಮತತ್ತ್ವಗಳ ಪರಿಪೋಷಣೆಗೆ ಮೀಸಲಾಗಿತ್ತು. ಆಗಸ್ಟಿನ್‍ನಲ್ಲಿ ಪ್ಲೋಟಿನಸ್ ಅನುಭಾವವಾದ ಛಾಯೆ ಕಂಡುಬರುತ್ತದೆ. ಶ್ರುತಿವಾದ ಮತ್ತು ಅನುಭಾವವಾದಗಳು ಪರಸ್ಪರ ಪೂರಕವಾಗಿದ್ದವು ಶ್ರುತಿವಾದ ಕ್ರೈಸ್ತಮಠ ಅಂಗೀಕರಿಸಿದ್ದ ತತ್ತ್ವಗಳನ್ನು ಪೋಷಿಸುವುದರಲ್ಲಿ ನಿರತವಾಯಿತು. ಅನುಭಾವವಾದ ವ್ಯಕ್ತಿಯ ಪರಿಶುದ್ಧ ಜೀವನದ ಸಮಸ್ಯೆಗಳಲ್ಲಿ ಆಸಕ್ತಿತಾಳಿತು. ಗ್ರೀಕ್ ಮತ್ತು ರೋಮನ್ ಸಾಹಿತ್ಯದಲ್ಲಿ ಕಳೆದು ಹೋಗುತ್ತಿದ್ದ ಆಸಕ್ತಿಯನ್ನು ಪುನರುಜ್ಜೀವನಗೊಳಿಸಿದ್ದು ಇದರ ಮತ್ತೊಂದು ಪ್ರಧಾನ ಲಕ್ಷಣ. ಇದರಿಂದ ಅರಿಸ್ಟಾಟಲನ ಬರಹಗಳಲ್ಲಿ ಒಂದು ಹೊಸ ಆಸಕ್ತಿ ಮೂಡಿತು.

	ಸಾಮಾನ್ಯ ಸ್ವರೂಪಕ್ಕೆ ಸಂಬಂಧಪಟ್ಟ ಪ್ರಶ್ನೆಗೆ ಉತ್ತರವಾಗಿ ನಾಮವಾದ ಮತ್ತು ವಾಸ್ತವವಾದ ಎನ್ನುವ ವಾದಗಳು ಹುಟ್ಟಿದವು. ಸಾಮಾನ್ಯ ಎಂಬುದು ಒಂದು ಬರಿಯ ಹೆಸರೇ (ಶಬ್ದ ಸಂಕೇತವೇ) ಅಥವಾ ಅದಕ್ಕೆ ಸರಿಹೊಂದುವ ವಸ್ತುವನ್ನು ಅದು ನಿರ್ದೇಶಿಸುತ್ತದೆಯೇ ಎಂಬುದು ಈ ವಾದಗಳು ವಿಚಾರಮಾಡಿದ ಪ್ರಶ್ನೆ. ಸಾಮಾನ್ಯ ಎಂಬುದು ಪ್ರತ್ಯೇಕ ವಸ್ತುವಲ್ಲ, ಅದೊಂದು ಹೆಸರು, ಮಾತ್ರ ಎಂಬುದು ನಾಮವಾದಿಗಳ ಅಭಿಪ್ರಾಯ. ಸಾಮಾನ್ಯ ಎಂಬುದು ವಸ್ತು ನಿರ್ದೇಶಕ ಎಂದು ವಾಸ್ತವವಾದಿಗಳು ತಿಳಿಯುತ್ತಾರೆ. ಉದಾಹರಣೆಗೆ ಗೋತ್ವ ಎನ್ನುವ ಮಾತಿಗೆ ಸಂವಾದಿಯಾಗಿ ವಾಸ್ತವವಿಷಯವಿದೆ. ಎಂದು ವಾಸ್ತವಾದಿಗಳು ಹೇಳಿದರೆ ನಾಮವಾದಿಗಳು ಇದೊಂದು ಹೆಸರು ಮಾತ್ರ ಎನ್ನುತ್ತಾರೆ. ಇದರ ಸುತ್ತ ಹೆಣೆದುಕೊಂಡ ವಾದವಿವಾದಗಳು ಇಡೀ ಮಧ್ಯಯುಗದ ತಾತ್ತ್ವಿಕರನ್ನು ಕಾಡಿದುವು.
(ಎಂ.ವೈ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ